ಭಾರತೀಯ ಚಿತ್ರಕಲೆ	

	ಭಾರತೀಯ ಚಿತ್ರಕಲೆ ಪ್ರಾಗ್ಚಿತ್ರಗಳ ಕಾಲಕ್ಕೇ ಪ್ರಾರಂಭವಾಯಿತು ಎನ್ನಬೇಕು. ಭಾರತದ ಅತ್ಯಂತ ಪ್ರಾಚೀನ ಚಿತ್ರಭಂಡಾರಗಳಾದ ಅಜಂತ, ಬಾಗ್ ಹಾಗೂ ಬಾದಾಮಿ ಮುಂತಾದ ಗುಹೆಗಳಿಗೂ ಮೊದಲು ರಚನೆಗೊಂಡ ಈ ಕೃತಿಗಳು ಆದಿಮಾನವರ ಕಾಲಕ್ಕೆ ಸೇರುತ್ತವೆ. ಗುಹೆಗಳೇ ಅವರ ಆಶ್ರಯದ ತಾಣಗಳು. ಸಂತೋಷ, ದುಃಖ, ವಿಭ್ರಮೆ, ಮುಂತಾದ ಮಾನಸಿಕ ಉದ್ವೇಗಗಳು ಉಂಟಾದಾಗ ಈ ಜನ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಸುಲವಾಗಿ ಗುಹೆಯ ಗೋಡೆಗಳ ಮೇಲೆ ಗೀಚತೊಡಗಿರಬೇಕು. ಇದೇ ಕ್ರಮೇಣ ಚಿತ್ರ ರಚನೆಗೆ ಮೂಲಪ್ರೇರಣೆಯಾಯಿತು. ಆಹಾರ ಮತ್ತು ಆಶ್ರಯಕ್ಕಾಗಿ ಬೇಟೆಯನ್ನೇ ತಮ್ಮ ವೃತಿಯನ್ನಾಗಿಸಿಕೊಂಡಿದ್ದ ಆದಿಮಾನವರು ತಮ್ಮ ಕಸುಬಿನ ಚಟುವಟಿಕೆಗಳನ್ನೇ ಚಿತ್ರಗಳ ವಸ್ತುವಾಗಿಸಿಕೊಂಡರು. ಸುಲಭವಾಗಿ ಲಭ್ಯವಾಗುವಂಥ ಮಣ್ಣು, ಮರಗಳ ಬಣ್ಣಗಳನ್ನು ಪ್ರಾಣಿಗಳ ಕೊಬ್ಬು ಮೊದಲಾದವುಗಳ ಜೊತೆ ಬಳಸಿದರು. ಹೀಗೆ ಆದಿಮಾನವ ಚಿತ್ರಕಲೆ ಮೊದಲಾಯಿತು. ಭಾವನೆಗಳನ್ನು ಅರುಹವುದೇ ಮೂಲ ಉದ್ದೇಶವಾಗಿದ್ದ ಈ ಚಿತ್ರಗಳು ಮಕ್ಕಳ ರಚನೆಗಳಂತೆ ಭಾವಪ್ರಧಾನವಾಗಿವೆ.

	ಆಫ್ರಿಕ, ಯೂರೊಪ್, ಏಷ್ಯ ಖಂಡಗಳಲ್ಲಿ ಆದಿಮಾನವ ಬಳಗ ಎಲ್ಲೆಲ್ಲಿ ಬದುಕಿತ್ತೋ ಅಲ್ಲೆಲ್ಲ ಈ ಬಗೆಯ ಚಿತ್ರಕಲೆ ಕಂಡುಬರುತ್ತದೆ. ಮನಸ್ಸಿನ ಉಲ್ಲಾಸವನ್ನು ಪ್ರಕಟಗೊಳಿಸುವ ಸಲುವಾಗಿ ಬರೆದಂಥ ಈ ಚಿತ್ರಗಳಲ್ಲಿ ಸರಳತೆ ಎದ್ದು ಕಾಣುತ್ತದೆ. ಕೆಂಗಾವಿ ಬಣ್ಣಗಳ ರೇಖೆಗಳಿಂದ ಚಪ್ಪಟೆಯಾಗಿ ಚಿತ್ರಿಸಲ್ಪಟ್ಟಿರುವ ಮಾದರಿಗಳೇ ಹೆಚ್ಚು. ಲಲಿತ ರೇಖೆಗಳಿಂದ ಬಂಡೆಗಳ ಮೇಲೆ ಬರೆದು ಅಥವಾ ಗಟ್ಟಿಕಲ್ಲಿಂದ ಬಂಡೆಗಳ ಮೇಲೆ ಗಾಯಮಾಡಿ ಅಂಕಿಸಿದ ರೂಪಗಳೂ ಸಿಗುತ್ತವೆ. ಇವನ್ನು ಗಾಯಚಿತ್ರಗಳು (ಬ್ರೂಸಿಂಗ್) ಎಂದು ಕರೆಯುವುದು ವಾಡಿಕೆ. ಇವು ರೇಖಾ ಚಿತ್ರಗಳಿಂತೆಯೋ ನೆರಳು ಚಿತ್ರಗಳಿಂತೆಯೋ ಮೂಡಿ ಬಂದಿವೆ. ಇಂಥ ಚಿತ್ರರಚನೆಗಳು ಹೆಚ್ಚಾಗಿ ಬಂಡೆಗಳ ಮೇಲೆ ಮತ್ತು ಗವಿಗಳ ಗೋಡೆಗಳ ಮೇಲೆ ಕಂಡು ಬರುತ್ತವೆ.

	ಉತ್ತರಪ್ರದೇಶದ ಮಿರ್ಜಾಪುರ, ಬಂಡಾ ಎಂಬಲ್ಲೂ ಬುಂದೇಲಖಂಡದ ಮಹಾದೇವ ಪರ್ವತ, ಸಾಂಚಿ-ಭೋಪಾಲಗಳ ನಡುವಣ ಕೆಲ ಸ್ಥಳಗಳಲ್ಲೂ ಬಾಗಲಖಂಡದ ಕೈಮೂರು ಬೆಟ್ಟಗಳಲ್ಲೂ ವಿಂಧ್ಯಪರ್ವತಗಳ ಗುಹೆಗಳಲ್ಲಿಯೂ ಮಧ್ಯ ಪ್ರದೇಶದ ರಾಮಘಟ್ಟಬೆಟ್ಟದ ಯೋಗಿಪುರ (ಜೋಗಿಮಾರ) ಗುಹೆಗಳಲ್ಲಿಯೂ ಈತೆರನ ಚಿತ್ರಗಳು ಕಂಡುಬರುತ್ತವೆ. ಮಧ್ಯಪ್ರದೇಶದ ರಾಯಘಡ ಸಂಸ್ಥಾನದ ಮಾಂದ್‍ನದಿಯ ಪೂರ್ವಕ್ಕಿರುವ ಸಿಂಗನ್‍ಪುರವೆಂಬ ಗ್ರಾಮದ ಬಳಿಯ ಬೆಟ್ಟಗಳಲ್ಲಿ ಕೆಲವು ಗುಹೆಗಳಿವೆ. ಅಲ್ಲಿ ಕೆಂಪು ಮತ್ತು ತೆಳುಹಳದಿ ಬಣ್ಣಗಳಿಂದ ಬರೆದ ಚಿತ್ರಗಳಿವೆ. ಇವು ಸುಮಾರು 10,000 ವರ್ಷಗಳಷ್ಟು ಪ್ರಾಚೀನವಾದವು ಎಂಬ ಅಭಿಪ್ರಾಯವಿದೆ. ಇಲ್ಲಿಯ ಚಿತ್ರಗಳಿಗೆ ಸ್ವಲ್ಪಮಟ್ಟಿಗೆ ಆಫ್ರಿಕದ ಬುಷ್ ಮನ್ ಗವಿಯ ಚಿತ್ರ ಹಾಗೂ ಸ್ಪೇನಿನ ಪ್ರಾಚೀನ ಗುಹೆಗಳ ಚಿತ್ರಗಳ ಜೊತೆ ಹೋಲಿಕೆ ಇದೆ. ಹೆಚ್ಚಿನವು ಬೇಟೆಯ ದೃಶ್ಯಗಳು. ಜಿಂಕೆ, ಆನೆ, ಮೊಲ ಮೊದಲಾದ ಪ್ರಾಣಿಗಳ ಚಿತ್ರಗಳೂ ಇಲ್ಲಿವೆ. ದೊಡ್ಡ ಕಾಡುಕೋಣವೂಂದನ್ನು ಹಿಡಿಯುತ್ತಿರುವ ದೃಶ್ಯ. ಬೇಟೆಗಾರರು ಪ್ರಾಣಿಯನ್ನು ಸುತ್ತುವರಿದು ನಿಂತಿರುವ ದೃಶ್ಯ, ಕಾಡುಕೋಣವೊಂದು ಕೆಲವರನ್ನು ಕೊಂಬಿನಿಂದ ಎತ್ತಿಹಾಕಿ ತಿವಿಯುತ್ತಿರುವ ದೃಶ್ಯ. ಈಟಿಯಿಂದ ಅ ಕಾಡುಕೋಣವನ್ನು ಗಾಯಗೊಳಿಸುತ್ತಿರುವ ದೃಶ್ಯ ಮುಂತಾದವು ಚಿತ್ರಣಗೊಂಡಿವೆ.

	ವಿಂಧ್ಯ ಪರ್ವತಗಳಲ್ಲಿ ಶಿಲಾಯುಗದ ಉತ್ತರಕಾಲದ ಚಿತ್ರಗಳೂ ಕೈಮೂರ ಬೆಟ್ಟಗಳ ಗುಹೆಗಳಲ್ಲಿ ಇತಿಹಾಸಪೂರ್ವದ ಕುರುಹುಗಳೂ ದೊರೆತಿವೆ. ಬಂಡೆಗಳ ಒಳ ಮೈಮೇಲೆ ಕೆಂಪು, ಕಪ್ಪು-ಕಾವಿ ಬಣ್ಣಗಳಲ್ಲಿ ಚಿತ್ರಿಸಲಾದ ಈ ಚಿತ್ರಗಳು ಒರಟು ಕಲಾಕೃತಿಗಳು. ಇವುಗಳ ಕಾಲನಿಷ್ಕರ್ಷೆ ಮಾಡಲಾಗಿಲ್ಲ. ಸ್ಪೇನ್ ದೇಶದ ಕೋಗುಲ್‍ನ ಬಂಡೆಗವಿಗಳಲ್ಲಿಯ ವರ್ಣಚಿತ್ರಗಳೊಂದಿಗೆ ಸಾದೃಶ್ಯ ತೋರುವ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಗುಹಾಚಿತ್ರಗಳು ಪ್ರಾಚೀನ ಚಿತ್ರಗಳೆಂದು ಪರಿಗಣಿಸಲಾಗಿದೆ. ಕೆಂಪು ಬಣ್ಣದಲ್ಲಿ ಬರೆಯಲಾಗಿರುವ ಈ ಚಿತ್ರಗಳು ಉತ್ತರ ಶಿಲಾಯುಗದವಾಗಿರಬೇಕೆಂದು ಅಭಿಪ್ರಾಯಪಡಲಾಗಿದೆ.

	ಮಧ್ಯಪ್ರದೇಶದ ರಾಮಘಡ ಬೆಟ್ಟದ ಯೋಗಿಪುರ ಗುಹೆಗಳಲ್ಲಿರುವ ವರ್ಣಚಿತ್ರಗಳು ಕ್ರಿ.ಪೂ. 3ನೆಯ ಶತಮಾನದವೆಂದು ತೀರ್ಮಾನಿಸಲಾಗಿದೆ. ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳಿಂದ ಇವು ಬರೆಯಲ್ಪಟ್ಟಿವೆ. ಮನುಷ್ಯಾಕೃತಿ ಮತ್ತು ಅನೇಕ ಪ್ರಾಣಿಗಳ ಚಿತ್ರಗಳು ಇಲ್ಲಿವೆ. ಹಾಗೆಯೇ ಮಧ್ಯಪ್ರದೇಶದ ಹೋಶಂಗಾಬಾದಿನ ಮರಳುಗಲ್ಲಿನ ಬೆಟ್ಟವೊಂದರಲ್ಲಿ ಚಾಚಿದ ಬಂಡೆಗಳ ಆಸರೆಯಲ್ಲಿ ಆದಿಮಾನವನಿಂದ ಬರೆಯಲಾದ ಚಿತ್ರಗಳು ಕಂಡುಬರುತ್ತವೆ. ಚಿತ್ರಿತವಾದ ಪ್ರಾಣಿಗಳಲ್ಲಿ ಮಡಿಸುಗೊಂಬಿನ ಆನೆ ಮತ್ತು ಬಿಡಿಸುಗೊಂಬಿನ ಗೂಳಿಗಳನ್ನು ನೆರಳು ಚಿತ್ರಗಳಾಗಿ ತೋರಿಸಲಾಗಿದೆ. ಈಟಿ, ಗುರಾಣಿಗಳನ್ನು ಹಿಡಿದ ಆನೆ ಸವಾರರೂ ಕುದುರೆ ಸವಾರರೂ ಇದರಲ್ಲಿದ್ದಾರೆ. ಬೇಟೆಯ ಮಾದರಿಗಳನ್ನೂ ಪಶುಪಾಲನೆಯ ಮಾದರಿಗಳನ್ನೂ ಈ ಚಿತ್ರಗಳಲ್ಲಿ ಕಾಣಬಹುದಾಗಿದೆ. ಇವುಗಳ ಕಾಲ ಕ್ರಿ. ಪೂ. ಸುಮಾರು 2000 ವರ್ಷಗಳೆಂದು ಊಹಿಸಲಾಗಿದೆ. ಕರ್ನಾಟಕ ಬಾದಾಮಿ, ಅಂಕಲಗಿಮಠಗಳಲ್ಲೂ ಜಮಖಂಡಿಯ ಬಳಿ ಗೊಂಬೆ ಗುಡ್ಡದಲ್ಲೂ ಬಳ್ಳಾರಿಯ ಕುಪ್ಪಗಲ್ಲಿನಲ್ಲೂ ಈ ತೆರನಾದ ಚಿತ್ರಗಳು ಇವೆ. ತುಂಗಭದ್ರಾ ನದಿ ದಂಡೆಯ ಉತ್ತರದಲ್ಲಿ ಆನೆಗುಂದಿ, ಹಿರೆ ಬೆನಕಲು ಮೊದಲಾದ ಕಡೆಗಳಲ್ಲಿಯ ಗುಡ್ಡಗಳಲ್ಲಿ ಇತಿಹಾಸಪೂರ್ವ ಕಾಲದ ಚಿತ್ರಗಳು ಕಂಡುಬರುತ್ತವೆ. ಇವು ನವಶಿಲಾಯುಗದಲ್ಲಿ ಅಥವಾ ಅನಂತರದ ಕಾಲದಲ್ಲಿ ಬಂದ ಕಲ್ಗೊರಿ ಸಂಸ್ಕøತಿಯ ಜನ ಬರೆದ ಚಿತ್ರಗಳಾಗಿರಬಹುದೆಂಬ ವಾದವಿದೆ. ಕೈಕೈಹಿಡಿದು ಕುಣಿಯುವ ಜನರ ಸಾಲು, ಎರಳೆ, ಹಿಣಿಲುಳ್ಳಹೋರಿ, ಕುದುರೆಸವಾರ, ನವಿಲು ಮೊದಲಾದ ಹಲವಾರು ಆಕೃತಿಗಳನ್ನು, ಇಲ್ಲಿ ಕಾಣಬಹುದಾಗಿದೆ. ಕೆಂಗಾವಿ ಬಣ್ಣದಲ್ಲಿ ಚಪ್ಪಟೆಯಾಗಿ ಬರೆದ ಚಿತ್ರಗಳಿವು. ಕ್ರಿ. ಪೂ 2,000-1,000 ವರ್ಷಗಳಷ್ಟು ಹಿಂದಿನ ಮಡಕೆಯ ಆಲಂಕಾರಿಕ ಚಿತ್ರವೊಂದು ಬೆಳಗಾವಿ ಜಿಲ್ಲೆಯ ಸತ್ತಿ ಎಂಬಲ್ಲಿ ದೊರತಿದೆ. ಇದು ತಾಮ್ರಯುದ್ದೆಂದು ನಿಷ್ಕರ್ಷಿಸಲಾಗಿದ್ದು ನೇರಳೆಗಪ್ಪು ಬಣ್ಣದಲ್ಲಿ ಬರೆಯಲಾಗಿದೆ. ನೀಳಕೊಕ್ಕಿನ ಕೊಕ್ಕರೆ ಬಳಗದ ಪಕ್ಷಿಯ ಚಿತ್ರದಂತೆ ಭಾಸವಾಗುತ್ತದೆ. (ನೋಡಿ- ಆದಿಮಾನವ-ಕಲೆ) 
(ನೋಡಿ- ಆದಿಮಜನರ-ಕಲೆ) 

	ಸಿಂಧೂಕಣಿವೆಯ ಚಿತ್ರಕಲೆ: ಕ್ರಿ.ಪೂ. 3,000-2000 ವರ್ಷಗಳಷ್ಟು ಹಳೆಯದಾದ ಹರಪ್ಪಾ ಮೊಹೆಂಜೊದಾರೂ ಸಂಸ್ಕøತಿಯಲ್ಲಿ ಚಿತ್ರಕಲೆಯಿಂದ ಕೂಡಿದ ಮಡಕೆ, ಚೂರುಗಳು, ಮುದ್ರೆಗಳು, ಕಲಾವಸ್ತುಗಳು, ಮಣ್ಣಿನ ಮೂರ್ತಿಗಳು, ಆಭರಣಗಳು, ಅಲಂಕಾರ ಮಾದರಿಯ ಚಿತ್ರಗಳು, ಬರೆಹಗಳು ಮತ್ತು ಲೋಹ ವಿಗ್ರಹಗಳು ಕಂಡುಬಂದಿವೆ. ವಿವಿಧ ನಮೂನೆಯ ಚುಕ್ಕೆ ಸಾಲುಗಳು, ಗಿಡಮರಗಳು, ತಾಯಿಮಗ, ಮನುಷ್ಯನೊಬ್ಬ ಹಸುವಿನ ಬಾಲ ಹಿಡಿದು ನದಿದಾಟುವ ದೃಶ್ಯ, ನವಿಲು, ಹಕ್ಕಿಗಳು, ಜಿಂಕೆ, ಒಂಟೆ, ಹುಲಿ, ಆಡು ಮೊದಲಾದ ಪ್ರಾಣಿಗಳ ಚಿತ್ರಗಳನ್ನು ನೈಜವಾಗಿ ಚಿತ್ರಿಸಿರುವುದು ಕಂಡುಬರುತ್ತದೆ. ಕಂಚಿನ ಲೋಹದ ನರ್ತಕಿಯ ಪ್ರತಿಮೆ ಮತ್ತು ಮನುಷ್ಯ ವಿಗ್ರಹಗಳು ಇಲ್ಲಿ ದೊರೆತಿವೆ. ಕಲ್ಲು, ಲೋಹ, ದಂತಗಳ ನೂರಾರು ಮುದ್ರೆಗಳು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟಿವೆ. ಆನೆ, ಖಡ್ಗಮೃಗ, ಹುಲಿ, ಹೋರಿಗಳನ್ನು ಒಳಗೊಂಡಂತೆ ಒಬ್ಬ ಮನುಷ್ಯನ ಆಕೃತಿಯ ರಚನೆಯ ಮುದ್ರೆ ಅತ್ಯಂತ ಸಾಂಕೇತಿಕವೂ ಪ್ರಶಸ್ತವೂ ಆದ ಕಲಾಕೃತಿಯೆಂದು ಪರಿಗಣಿಸಲಾಗಿದೆ. ಆದರೆ ಹರಪ್ಪಾಮಹೆಂಜೊದಾರೋ ಕಲಾಕೃತಿಗಳ ಅನಂತರದ ಕಾಲದಲ್ಲಿ ಇತಿಹಾಸಪೂರ್ವದ ಯಾವುದೇ ಕಲಾಕೃತಿ ಕಂಡುಬರದಿರುವುದು ವಿಸ್ಮಯವೆಂದೇ ಹೇಳಬೇಕು. ವೇದಗಳಲ್ಲೂ ಪುರಾಣಕೃತಿಗಳಲ್ಲೂ ಚಿತ್ರಕಲೆಯ ಬಗೆಗಿನ ಉಲ್ಲೇಖಗಳು ಇದ್ದರೂ ಅಂಥ ಸಾಕ್ಷಿಗಳು ದೊರೆಯದಿರುವುದು ಅಷ್ಟೇ ಸೋಜಿಗದ ವಿಷಯ.

	ಕ್ರಿ. ಶ. 3ನೆಯ ಶತಮಾನದಲ್ಲಿ ವಾತ್ಸಾಯನನಿಂದ ರೂಪಿತವಾದ ಕಾಮಸೂತ್ರ ಗ್ರಂಥದಲ್ಲಿ ಚಿತ್ರಕಲೆಗೆ ಸಂಬಂಧಿಸಿದಂತೆ ರೂಪ ಬೇಧಾ: ಪ್ರಮಾಣಾನಿ ಭಾವ ಲಾವಣ್ಯ ಯೋಜನಮ್, ಸಾದೃಶ್ಯಂ ವರ್ಣಿಕಾಭಂಗಂ ಇತಿಷಡಂಗಕಮ್ ಎಂಬ ಸೂತ್ರ ಬರುತ್ತದೆ. ಭಾರತೀಯ ಚಿತ್ರಕಾರರು ಈ ಪಡಂಗಗಳನ್ನು ತಮ್ಮ ಚಿತ್ರಗಳಲ್ಲಿ ಮೂರ್ತೀಕರಿಸಲು ಯತ್ನಿಸಿದ್ದಾರೆ. ಚಿತ್ರಕಲೆ ಕುರಿತಾದ ಅತ್ಯಂತ ಪ್ರಾಚೀನ ಶಾಸ್ತ್ರಗಂಥ್ರ 'ಚಿತ್ರಸೂತ್ರ ಇನ್ನೊಂದು ವಿಷ್ಣು ಧರ್ಮೋತ್ತರ ಪುರಾಣ. ಈ ಎರಡನೆಯ ಪುಸ್ತಕದಲ್ಲಿ ಚಿತ್ರ ಸೂತ್ರಗಳ ಉಲ್ಲೇಖ ಇದೆ. ಶಾಸ್ತ್ರರೀತ್ಯ ಚಿತ್ರಿಸಿದ ಚಿತ್ರ ಧರ್ಮ, ಅರ್ಥ, ಕಾಮ, ಮೋಕ್ಷಾದಿ ನಾಲ್ಕು ಪುರುಷಾರ್ಥಗಳನ್ನು ಕೊಡುತ್ತದೆ ಎಂದು ಈ ಗ್ರಂಥದಲ್ಲಿ ಪ್ರಶಂಸಿಲಾಗಿದೆ.

	ಗಾಂಧಾರಚಿತ್ರ ಕಲೆ: ಭಾರತ ಮತ್ತು ಗ್ರೀಕ್ ಕಲೆಗಳ ಸಮ್ಮಿಲನದಿಂದ ಅವಿರ್ಭವಿಸಿದ ಚಿತ್ರ ಕಲೆ ಇದು. ಗ್ರೀಸ್ ದೇಶದ ಶಿಲ್ಪಕಲೆಯ ಲಕ್ಷಣಗಳುಳ್ಳ ಈ ಶೈಲಿಯಲ್ಲಿ ಬುದ್ಧನ ಪ್ರತಿಮೆಗಳೂ ಬುದ್ಧನ ಜೀವನದ ಘಟನೆಗಳನ್ನು ನಿರೂಪಿಸುವ ಉತ್ಕೀರ್ಣ ಶಿಲ್ಪದ ಶಿಲಾಫಲಕಗಳೂ ನಿರ್ಮಾಣಗೊಂಡಿದೆ. ಅಂಗೋಪಾಂಗಗಳ ಪ್ರಮಾಣ, ತಲೆಗೂದಲ ಶೈಲಿ ತುಟಗಳ ರಚನೆ, ಬಟ್ಟಬರೆಗಳವಿನ್ಯಾಸ ಮುಂತಾದವುಗಳ ಮೇಲೆ ಗ್ರೀಕ್ ಕಲೆಯ ಅಪರಿಮಿತ ಪ್ರಭಾವವನ್ನು ಈ ಕಾಲದ ಕಲೆಯಲ್ಲಿ ಕಾಣಬಹುದಾಗಿದೆ. ಗಾಂಧಾರ ಚಿತ್ರಕಲೆಯ ಕಾಲಾವಧಿ ಕ್ರಿ. ಪೂ. 100 ರಿಂದ ಕ್ರಿ. ಶ. 300.

	ಅಜಂತಚಿತ್ರ ಕಲೆ: ಅಜಂತಕಲೆ ಬೌದ್ಧ ಚಿತ್ರಕಲೆಯ ಮತ್ತು ಭಾರತೀಯ ಚಿತ್ರಕಲಾ ಇತಿಹಾಸದ ಸ್ವರ್ಣಯುಗ ಎನ್ನಬಹುದು. ಕ್ರಿ.ಪೂ. 100ರಿಂದ 700ರ ಅವಧಿಯಲ್ಲಿ ನಿರ್ಮಾಣಗೊಂಡ ಈ ಕಲೆ ಭಾರತೀಯ ಚಿತ್ರಕಲೆಯನ್ನು ಪ್ರಪಂಚದ ಚಿತ್ರಕಲೆಯ ಮಟ್ಟಕ್ಕೆ ಏರಿಸಿತು. ಅಜಂತದ ಶಾಖೆ ಗ್ವಾಲಿಯರ್‍ನ ಬಾಗ್, ದಕ್ಷಿಣ ಭಾರತದ ಸಿತ್ತನವಾಸಲ್, ಸಿಂಹಳದ ಸಿಗೀರಿಯಕ್ಕೂ ವಿಸ್ತರಿಸಿತ್ತು. ಅದರ ಪ್ರಭಾವ ನೆರೆರಾಜ್ಯಗಳಾದ ಬರ್ಮಾ, ಮಧ್ಯಏಷ್ಯ, ಚೀನ, ಜಪಾನುಗಳಿಗೂ ಹಬ್ಬಿತ್ತು.

	ಸುಮಾರು 800ವರ್ಷಗಳ ಕಾಲ ಬೌದ್ಧ ಭಿಕ್ಷುಗಳಿಂದ ಈ ಅಪೂರ್ವ ಚಿತ್ರಕಲೆ, ಶಿಲ್ಪರೂಪಗಳು, ಗುಹಾಂತರ ದೇವಾಲಯಗಳು ನಿರ್ಮಿಸಲ್ಪಟ್ಟಿದ್ದುವು. ಅಂದರೆ, ಬೌದ್ಧಮತ ಸ್ಥಾಪನೆಯಾದ ಮೂರು ಶತಮಾನಗಳ ಅನಂತರ ಅಜಂತ ಗುಹೆಗಳ ನಿರ್ಮಾಣ ಪ್ರಾರಂಭವಾಗಿದ್ಧಿರಬೇಕು. ಈ ಎಂಟು ಶತಮಾನಗಳ ಕಾಲಾವಧಿಯನ್ನು ಅವುಗಳ ರಚನೆಯ ದೃಷ್ಟಿಯಿಂದ ರಾಜಕೀಯಾನುಸಾರ ಉತ್ತರ ಭಾರತದ ಗುಪ್ತರ ಕಾಲ, ದಕ್ಷಿಣ ಭಾರತದ ವಾಕಾಟಕರ ಕಾಲ ಹಾಗೂ ಚಾಳುಕ್ಯರ ಕಾಲ ಎಂದು ಮೂರು ವರ್ಗಗಳಾಗಿ ವಿಭಾಗಿಸಬಹುದು.

	ಅಜಂತದಲ್ಲಿ ಸಂಶೋಧಿಸಲಾದ, ಹೆಚ್ಚು ಕಡಿಮೆ, ಎಲ್ಲ ಗುಹೆಗಳೂ ವರ್ಣಚಿತ್ರಗಳಿಂದ ಅಲಂಕೃತವಾಗಿವೆ. ಮೊದಲ ಹಂತದಲ್ಲಿ ಭೋಧಿವೃಕ್ಷ ಮತ್ತು ಸ್ಥೂಪಗಳನ್ನು ಆರಾಧಿಸುವ ಚಿತ್ರಗಳನ್ನು ಬರೆಯಲಾಗಿದೆ. ಮಧ್ಯಭಾಗದಲ್ಲಿ ಜಾತಕ ಅವಧಾನಗಳಿಂದ ಎತ್ತಿಕೊಂಡು ನಿರೂಪಣಾಶೈಲಿಯ ಕಥೆಗಳನ್ನು ಚಿತ್ರಿಸಲಾಗಿದೆ. ಮಣ್ಣು, ಮರಗಳು, ಹಕ್ಕಿಗಳು, ಜಿಂಕೆಗಳು, ಆನೆಗಳು, ಪ್ರಾಕಾರಗಳು, ಹೊರಾಂಗಣಗಳು, ಆನೆಬಾಗಿಲು, ಮಾಡಗಳು ಎಲ್ಲಕ್ಕೂ ಮಿಗಿಲಾಗಿ ಗಂಡಸರ, ಹೆಂಗಸರ, ಮಕ್ಕಳ ಲಾಲಿತ್ಯಮಯವಾದ ನಿಲುವುಗಳು, ಸಲೀಸಾಗಿ ಓಡಾಡುವ ಆಡುವ ಜನರ ಆಹ್ಲಾದಮಯ ಚರ್ಯೆಗಳು ಇಲ್ಲಿ ಚಿತ್ರಿತವಾಗಿದೆ. ಬುದ್ಧನ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಘಟನೆಗಳನ್ನು ನಿರೂಪಿಸುವ ವರ್ಣಮಯವಾದ ಉಲ್ಲೇಖಗಳನ್ನು ಇಲ್ಲಿ ಕಾಣಬಹುದು.

	ಇಲ್ಲಿ ಎರಡು ಹಂತಗಳಲ್ಲಿ. ಅದೂ ಬಹಳ ಕಾಲದ ಅಂತರದಲ್ಲಿ ಚಿತ್ರಿಸಲಾಗಿರುವ ವರ್ಣಚಿತ್ರಗಳು ಕಂಡುಬರುತ್ತವೆ. ಮೊದಲ ಹಂತ, ಅಂದರೆ ಕ್ರಿ.ಪೂ. 2-1ನೆಯ ಶತಮಾನದಷ್ಟು ಪ್ರಾಚೀನತೆ ಇರುವ ಚಿತ್ರಗಳು 9 ಮತ್ತು 10ನೆಯ ಗುಹೆಗಳಲ್ಲಿವೆ. ಈ ಆಕೃತಿಗಳಲ್ಲಿಯ ವೇಷಭೂಷಣ ಮುಖ್ಯವಾಗಿ ತಲೆಯ ಮೇಲಿನ ಮುಂಡಾಸು ಮತ್ತು ಆಭರಣಗಳು ಸಾಂಚಿ ಮತ್ತು ಭಾರ್‍ಹುತ್‍ಗಳಲ್ಲಿಯ ಉಬ್ಬು ಕೆತ್ತನೆಯನ್ನು ಹೋಲುತ್ತವೆ. ಚಿತ್ರಗಳು ಒಳ್ಳೆಯ ಪ್ರೌಢಿಮೆಯನ್ನು ತೋರಿಸುತ್ತವೆ.

	ಎರಡನೆಯ ಹಂತ, ಪ್ರಾಯಶಃ ಕ್ರಿ.ಶ. 4-5ನೆಯ ಶತಮಾನದಲ್ಲಿ ಆರಂಭವಾಗಿ ಮುಂದಿನ ಎರಡು ಶತಮಾನಗಳಷ್ಟು ಕಾಲ ಮುಂದುವರಿದಿರಬೇಕೆಂದು ಊಹಿಸಲಾಗಿದೆ. ಈ ಕಾಲದ ಮೊದಲ ಘಟ್ಟ ವಾಕಾಟಕರ ಆಳ್ವಿಕೆಯ ಕಾಲದೊಂದಿಗೆ ಹೊಂದಿಕೊಳ್ಳುವ ಕಾರಣ, ಚಿತ್ರ ಕಲಾವಿದರ ಕುಂಚಗಳು ರಾಜಾಶ್ರಯದ ನೆರಳಿನಲ್ಲಿ ಬಾಳಿದ್ದನ್ನು ಅವುಗಳ ಶ್ರೀಮಂತಿಕೆಯಿಂದಲೇ ಗುರುತಿಸಬಹುದು. 1, 2 16 ಮತ್ತು 17ನೆಯ ಗುಹೆಗಳ ಭಿತ್ತಿಗಳಲ್ಲಿ ಉಳಿದುಕೊಂಡಿರುವ ಕೆಲವು ಚಿತ್ರಗಳೇ ಇದಕ್ಕೆ ಸಾಕ್ಷಿ. ಬೇರೆ ಬೇರೆ ಕಲಾವಿದರ ಕಲಾ ನೈಪುಣ್ಯದಲ್ಲಿ ವ್ಯತ್ಯಾಸ ಕಂಡುಬಂದರೂ ಈ ಅವಧಿಯ ಚಿತ್ರಗಳೆಲ್ಲ ಉತ್ಕøಷ್ಟವೂ ಅಮೋಘ ಅಭಿವ್ಯಕ್ತಿಯುಳ್ಳವೂ ಆಗಿವೆ ಎಂಬುದರಲ್ಲಿ ಸಂದೇಹವಿಲ್ಲ. ವರ್ಣಸಂಸ್ಕಾರ, ಸಮತೋಲನದ ಮತ್ತು ಪರಿಣಾಮಕಾರಿ ಸಂಯೋಜನೆ, ಸ್ಪಂದನಾತ್ಮಕ ಶಾರೀರಿಕ ಚರ್ಯೆ, ಹೆಣ್ಣು ಮಕ್ಕಳ ಸುಂದರ ಮುಖ ಮತ್ತು ಆಂಗಿಕ ಭಂಗಿ ಇವೆಲ್ಲವುಗಳಿಂದಲೂ ಭಿತ್ತಿಚಿತ್ರಗಳಲ್ಲೇ ಅತ್ಯಂತ ಉತ್ಕøಷ್ಟ ಮಾದರಿಯ ಚಿತ್ರಗಳಿವು ಎಂಬುದು ಸರ್ವವಿದಿತ.

	ಅಜಂತ ಭಿತ್ತಿಚಿತ್ರಗಳನ್ನು ಗಾರೆಚಿತ್ರ ಎಂದು ಕೆಲವೊಮ್ಮೆ ತಪ್ಪಾಗಿ ಬರಯುವುದುಂಟು. ಅಜಂತ ಕಲೆಯ ರೂಪರೇಷೆಯನ್ನು ಅಭ್ಯಸಿಸಿದವರು ಅದನ್ನು ಸ್ಟೆಕ್ಕೊ ವಿಧಾನದ ಚಿತ್ರಕಲೆ ಎಂದು ಪರಿಗಣಿಸಿದ್ದಾರೆ. ಗೋಡೆ ಇಲ್ಲವೆ ಮುಚ್ಛಿಗೆಗಳಿಗೆ ಗಾರೆಯನ್ನು ಬಳಿದ ಬಳಿಕ ಅದು ಒಣಗಿದ ಮೇಲೆ ಬರೆಯುವ ಚಿತ್ರ ವಿಧಾನವಿದು. ನೈಸರ್ಗಿಕವಾಗಿ ಲಭ್ಯವಾಗುವ ಬಿಳಿಜೇಡಿ ಮುಂತಾದ ಬಣ್ಣಗಳ ಜೊತೆಗೆ, ಅಜಂತ ಪ್ರದೇಶದಲ್ಲೇ ವಿಷೇವಾಗಿ ಸಿಗುವ ನೀಲಗಲ್ಲುಗಳನ್ನು ಇಲ್ಲಿ ಬಳಸಿದ್ದಾರೆ. 		(ನೋಡಿ- ಅಜಂತ)

	ಸಿಗೀರಯಾ ಚಿತ್ರಕಲೆ: ಅಜಂತ ಚಿತ್ರಕಲೆಯ ಸಮಕಾಲೀನದ್ದೆಂದು ಪರಿಗಣಿಸಲಾಗಿದೆ. ಸಿಗೀರಿಯಾ ಶ್ರೀಲಂಕಾದ ರಾಜಧಾನಿ ಕೊಲೊಂಬೊದಿಂದ ಸುಮಾರು 160 ಕಿಮೀ ದೂರದಲ್ಲಿದೆ. ಸುಮಾರು 180 ಮೀ ಅಡಿ ಎತ್ತರದ ಬಂಡೆಯ ಮೇಲೆ ಸ್ಥಿತವಾಗಿರುವ ಈ ಕಲಾಸಂಪತ್ತು ಭಾರತೀಯ ಸಂಪ್ರದಾಯದ ಕೊಡುಗೆ ಎಂಬ ಅಭಿಪ್ರಾಯವಿದೆ. ಇದು ಐದನೆಯ ಶತಮಾನದ್ದೆಂದು ಹೇಳಲಾಗಿದೆ.

	ಬಾಗ್ ಚಿತ್ರಕಲೆ: ಕ್ರಿ.ಶ. 600-900 ಅವಧಿಯಲ್ಲಿ ಅಜಂತದ ಹೊರಗೆ ಬಾಗ್, ಬಾದಾಮಿ, ಎಲ್ಲೋರಾ, ಸಿತ್ತವಾಸಲ್ ಮುಂತಾದ ಬಾಭಾಗಗಳಲ್ಲೂ ಚಿತ್ರಕಲೆಯ ಅವಿರ್ಭಾವವಾಯಿತು. ಗ್ವಾಲಿಯರ್‍ನ (ಮಧ್ಯಪ್ರದೇಶ) ಬಾಗ್ ಮತಿ ಎಂಬ ನದಿಯ ದಂಡೆಯಲ್ಲಿ ಸುಮಾರು 46 ಮೀ ಎತ್ತರದಲ್ಲಿ ಈ ಕಲಾ ಸಂಪತ್ತು ಸ್ಥಿತವಾಗಿದೆ. ಇಲ್ಲಿಯ ಚಿತ್ರಗಳಲ್ಲಿ ರೇಖಾ ವಿನ್ಯಾಸ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಹಸ್ತಪರ್ಯಂತ ಅಂಗಿಯ ಕೈಯಿರುವ ನರ್ತಕಿಯರು, ವಾದಕರು, ಗಾಯಕಿಯರು, ತಮ್ಮ ಸುಖದುಃಖಗಳನ್ನು ಸಖಿಯರೊಂದಿಗೆ ತೋಡಿ ಕೊಳ್ಳುವ ಲಲನೆಯರು, ಆನೆಗಳ ಮೆರವಣಿಗೆ, ಅನೆ ಸವಾರಿ ಮಾಡುತ್ತಿರುವ ದೊರೆ, ಬಸವ, ಪಕ್ಷಿ, ಫಲಪುಷ್ಪಾದಿಗಳ ಅನೇಕ ಚಿತ್ರಗಳು ಇಲ್ಲಿವೆ.

	ಎಲ್ಲೋರಾ ಚಿತ್ರಕಲೆ: ಕ್ರಿ.ಶ.ಸು. 400-900 ಅವಧಿಯಲ್ಲಿ ನಿರ್ಮಾಣಗೊಂಡಿರಬಹುದೆಂದು ಊಹಿಸಲಾದ ಎಲ್ಲೋರಾ ವಾಸ್ತುಶಿಲ್ಪಸಂಪತ್ತಿಗೆ ಹೆಸರಾದ ತಾಣ. ಅಜಂತಗುಹೆಗಳಿಂದ ಸುಮಾರು 88ಕಿಮೀ ದೂರದಲ್ಲಿ ಎಲ್ಲೋರಾ ನಿರ್ಮಾಣಗೊಂಡಿದೆ. ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಎಲ್ಲೋರಾದ ಕೈಲಾಸ ದೇವಾಲಯದ ಭಿತ್ತಿಗಳಮೇಲೆ ವರ್ಣಚಿತ್ರಗಳ ಬರೆಯಲ್ಪಟ್ಟವು. ಪುರಾಣ ಕಥೆಗಳ ಚಿತ್ರ, ಯುದ್ಧಭೂಮಿಯ ಹೋರಾಟ, ನಂದಿ, ನವಿಲಿನ ಮೇಲಿರುವ ಕಾರ್ತಿಕೇಯ, ಗರುಡವಾಹನ ವಿಷ್ಣು, ಶಿವ-ಪಾರ್ವತಿ, ನರ್ತಕಿಯರು, ಗಾಯಕಿಯರು, ಅಪ್ಸರೆಯರು ಹೀಗೆ ಎಲ್ಲೋರಾದ ವರ್ಣಚಿತ್ರಗಳ ವಸ್ತುವಿನ ಹರಹು ವಿಸ್ತಾರವಾದುದಾಗಿದೆ. 

			(ನೋಡಿ- ಎಲ್ಲೋರಾ)

	ಬಾದಾಮಿ ಚಿತ್ರಕಲೆ: ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಪ್ರಾಚೀನ ಐತಿಹಾಸಿಕ ಕೇಂದ್ರಗಳ ಪೈಕಿ ಒಂದು. ಇಲ್ಲಿ ಒಂದೊಂದು ಅಖಂಡ ಬಂಡೆಯಲ್ಲಿ ಒಂದೊಂದು ಗುಹಾಲಯವಿದ್ದು ಎರಡು ವೈಷ್ಣವ ಪಂಥಕ್ಕೂ, ಒಂದು ಶೈವ ಹಾಗೂ ನಾಲ್ಕನೆಯದು ಜೈನಸಂಪ್ರದಾಯಕ್ಕೂ ಸೇರಿವೆ. ಸುಮಾರು 14 ಶತಮಾನಗಳ ಹಿಂದೆ ನಿರ್ಮಿಸಲಾದ ಇಲ್ಲಿಯ ವಾಸ್ತುಶಿಲ್ಪ, ಮೂರ್ತಿಕಲೆ ಸುರಕ್ಷಿತವಾಗಿ ಉಳಿದು ಬಂದಿದ್ದರೂ ಭಿತ್ತಿಚಿತ್ರಕಲೆ ಅಳಿದುಳಿದ ಸ್ಥಿತಿಯಲ್ಲಿದೆ. ಅಜಂತ ಕಲೆಯ ಹೋಲಿಕೆ ಲಕ್ಷಣಗಳು ಇಲ್ಲಿಯ ಚಿತ್ರಕಲೆಯಲ್ಲಿ ಕಂಡುಬರುವ ವೈಶಿಷ್ಟ್ಯ. ಅಜಂತದಲ್ಲಿ ಬೌದ್ಧ ಧರ್ಮಕ್ಕೆ ಸಂಬಧಿಸಿದ ಜಾತಕಕತೆಗಳ ಚಿತ್ರಣವಿದ್ದರೆ, ಇಲ್ಲಿ ಹಿಂದೂ ಧರ್ಮದ ಪುರಾಣಕಥೆಗಳ ಸನ್ನಿವೇಶಗಳಿವೆ, ಹಿಂದೂಮತದ ಅತ್ಯಂತ ಪ್ರಾಚೀನಕಲಾ ಪಳೆಯುಳಿಕೆಯ ದೃಷ್ಟಿಯಿಂದ ಇಲ್ಲಿಯ ಚಿತ್ರಕಲಾಕೃತಿಗಳು ಪ್ರಾಶಸ್ತ್ಯ ಪಡೆಯುತ್ತವೆ. (ನೋಡಿ- ಬಾದಾಮಿ-1). ಅಜಂತ ಶೈಲಿಯ ಚಿತ್ರಕಲಾರಚನೆಯನ್ನು ದಕ್ಷಿಣಭಾರತದ ತಂಜಾವೂರಿನ ಸಮೀಪದ ಪುದುಕೋಟೆಯಲ್ಲೂ ಕಾಣಬಹುದು. ಪಲ್ಲವರಾಜನಿಂದ ಏಳನೆಯ ಶತಮಾನದಲ್ಲಿ ನಿರ್ಮಾಣಗೊಂಡ ಇಲ್ಲಿಯ ದೇವಾಲಯದಲ್ಲಿ ಗಂಧರ್ವರು, ಅಪ್ಸರೆಯರು, ರಮ್ಯವಾದ ಅಲಂಕಾರಿಕ ಆಕೃತಿಗಳು, ವೃಷಭ, ಆನೆ ಮುಂತಾದ ಪ್ರಾಣಿಗಳು, ಪಕ್ಷಿಗಳು ಮೊದಲಾದ ಚಿತ್ರಗಳಿವೆ. ಸಿತ್ತನವಾಸಲ್‍ನಲ್ಲಿಯೂ ಜೈನ್ ಪರವಾದ ಭಿತ್ತಿ ಚಿತ್ರಗಳಿವೆ.

	ಅಜಂತ ಚಿತ್ರ ಪ್ರಕಾರದ ಅನಂತರ ಭಾರತದ ಚಿತ್ರಕಲಾಪರಂಪರೆ ತುಸು ಸ್ಥಗಿತವಾದಂತೆ ತೋರುತ್ತದೆ. ಎಲ್ಲೋರ, ಎಲಿಫೆಂಟಾ ಮೊದಲಾದ ಕಡೆಗಳಲ್ಲಿ ಒಳ್ಳೆಯ ಶಿಲ್ಪ, ವಾಸ್ತು ನಿರ್ಮಾಣಕಾರ್ಯ ಭರದಿಂದ ನಡೆದಿದ್ದರಿಂದ, ಪ್ರಾಯಶಃ ಚಿತ್ರಕಲೆಗೆ ಅವಕಾಶ ಕಡಿಮೆಯಾಗಿರಬೇಕು. ಈ ಅವಧಿಯಲ್ಲಿ ತಾಳೆಗರಿಗಳ ಮೇಲೂ ಕಾಗದ ಹಾಗೂ ಇತರ ಮಾಧ್ಯಮಗಳ ಮೇಲೂ ಚಿತ್ರರಚನೆಯ ಪ್ರಯೋಗವನ್ನು ನಾವು ಕಾಣಬಹುದು. ಈ ಬಗೆಯ ಮಾಧ್ಯಮಗಳಲ್ಲಿ ಅರಳಿದ ಚಿತ್ರಶೈಲಿಗಳೆಂದರೆ, ಪಾಲಿ ಮತ್ತು ಜೈನ ಕೃತಿಗಳು. ಬಂಗಾಳ ಬಿಹಾರದಂಥ ಭಾರತದ ಪೂರ್ವದಿಕ್ಕಿನ ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದ ಈ ಬಗೆಯ ಶೈಲಿಯನ್ನು ಪೂರ್ವೀ ಶೈಲಿ ಎಂದು ಕರೆಯುವುದು ಸಂಪ್ರದಾಯ.

	ಕ್ರಿ.ಶ. 11-15ನೆಯ ಶತಮಾನದ ಅವಧಿಯಲ್ಲಿ ಜೈನಕಲೆ ಉದ್ದೀಪನಗೊಂಡಿತೆಂದು ಹೇಳಬಹುದು. ವಿಶಾಲವಾದ ಎದೆ, ಅಗಲವಾದ ನೇತ್ರಗಳು. ಗುರುಡನಂತಿರುವ ದೊಡ್ಡ, ಬಾಗಿದ ಚೂಪುಮೂಗು, ದೀರ್ಘ ಕಣ್ಣಿನ ಮೂಲೆಗಳು, ಬಿಲ್ಲಿಕಾರದ ಹುಬ್ಬು, ಎರಡು ಗಲ್ಲ, ಸಪೂರ ಸೊಂಟ ಮೊದಲಾದವು ಈ ಕಲೆಯ ವೈಶಿಷ್ಟ್ಯಗಳು. ಈ ಕೃತಿಗಳು ತಾಳೆ ಎಲೆಯ ಗ್ರಂಥಗಳಲ್ಲಿ ಹಾಗೆಯೇ ಒರಟಾದ ಮಸುಕು ಕಾಗದಗಳ ಮೇಲೆ ರೂಪುಗೊಂಡಿವೆ. ಗ್ರಂಥಗಳ ಅಲಂಕಾರಕ್ಕಾಗಿ ಅನೇಕ ನವೂನೆಯ ಅಂಚು ಚಿತ್ರಗಳೂ ಚಿತ್ರಿಸಲ್ಪಡುತ್ತಿದ್ದುವು.

	ಜೋಳ ಚಿತ್ರಕಲೆ: ಹದಿನಾಲ್ಕನೆಯ ಶತಮಾನದಲ್ಲಿ ಜೋಳಕಲೆ ಉತ್ತಂಗತೆ ಪಡೆಯಿತು. ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ ಜೋಳ ಪರಂಪರೆಯ ಕಲೆಯನ್ನು ಕಾಣಬಹುದು. ನಟರಾಜ, ಕೈಲಾಸಶಿವ, ಶೈವಸಂತರು ಮೊದಲಾದವು ಜೋಳಕಲೆಯ ದ್ಯೋತಕಗಳು, ಕಾಂಜೀವರದಲ್ಲೂ ಈ ಶೈಲಿಯ ಚಿತ್ರಗಳನ್ನು ಕಾಣಬಹುದು. ನಟರಾಜನ ಕಲ್ಪನೆ ಸಿಂಧೂನದಿ ಕಣಿವೆಯ ನಾಗರಿಕತೆಯ ಮೂಲವನ್ನು ಹೊಂದಿದೆ ಎಂಬ ಅಭಿಪ್ರಾಯವಿದೆ. ಸುಮಾರು 4000 ವರ್ಷಗಳ ಹಿಂದಿನ ಹರಪ್ಪಾ ಆಕೃತಿಯೊಂದರಲ್ಲಿ ಗಂಡು ನೃತ್ಯಕಾರ ನಿಂತ ಒಂದು ಭಂಗಿಯಿದೆ. ಆತ ತನ್ನ ಬಲಗಾಲ ಮೇಲೆ ನಿಂತು. ಎಡಗಾಲನ್ನು ಕೊಂಚ ಎತ್ತರಿಸಿದ್ದಾನೆ. ಇದೆ ನಟರಾಜನ ಮೂಲ ಸೆಲೆಯಾಗಿರಬಹುದೆಂದು ನಂಬಲಾಗಿದೆ. ನಟರಾಜನ ಕಲ್ಪನೆ ಭಾರತದ ದಾಕ್ಷಿಣಾತ್ಯ ಕಲೆಯ ಪ್ರಾವಿಣ್ಯಕ್ಕೆ ಒಂದು ದ್ಯೋತಕವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

	ಲೇಪಾಕ್ಷಿ ಚಿತ್ರಕಲೆ: ಕರ್ನಾಟಕದಲ್ಲಿ ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಭಿತ್ತಿಚಿತ್ರಕಲೆ ಮತ್ತೆ ಪುನರುಜ್ಜೀವನ ಹೊಂದಿತು. ಲೇಪಾಕ್ಷಿ ದೇವಾಲಯದ ಗೋಡೆಗಳ ಮೇಲೂ ಚಾವಣಿಯಲ್ಲೂ ಚಿತ್ರಿತವಾದ ಚಿತ್ರಗಳು ವಿಜಯನಗರ ಸಾಮ್ರಾಜ್ಯದ ಚಿತ್ರಕಲಾ ವೈಖರಿಗೆ ಉತ್ತಮ ನಿದರ್ಶನಗಳು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ಕ್ರಿ.ಶ. 16ನೆಯ ಶತಮಾನದ ಕಲಾ ಕೊಡುಗೆ ಎನ್ನಬಹುದು. ಕಿರಾತಾರ್ಜುನಿಯಂ, ರಾಮಾಯಣ, ಶಿವಾನುಗ್ರಹದ ಉಲ್ಲೇಖ, ರಾಜದರ್ಬಾರು ಮೊದಲಾದ ಚಿತ್ರಗಳನ್ನೂ ಇಲ್ಲಿ ಕಾಣಬಹುದು.

	ಮೊಗಲ್ ಚಿತ್ರಕಲೆ: ಭಾರತ ಮತ್ತು ಪರ್ಷಿಯಾ ದೇಶದ ಚಿತ್ರಕಲೆಗಳ ಸಮ್ಮಿಳನದಂತಿರುವ ಮೊಗಲ್ ಚಿತ್ರಕಲೆಯ ಕಾಲ ಕ್ರಿ.ಶ. 1550-1800. ವರ್ಣ ಚಿತ್ರಕಲೆ ಮಾತ್ರವಲ್ಲ, ವಾಸ್ತುನೇಯ್ಗೆ ಕಲೆಗಳೂ ಈ ಕಾಲದಲ್ಲಿ ವಿಕಸನಗೊಂಡವು. ಈ ಕಾಲದಲ್ಲಿ ಅನೇಕ ಚಾರಿತ್ರಿಕ ಗ್ರಂಥಗಳಿಗೆ ಚಿತ್ರಾಲಂಕರಣ ನಡೆಯಿತು. ಬಾಬರನ ಆತ್ಮಚರಿತ್ರೆ, ಮೊಗಲ್ ವಂಶದ ಚರಿತ್ರೆ ಹಾಗೂ ಅಕ್ಬರ್ ನಾಮಾಗಳಿಗೂ ಚಿತ್ರಗಳ ಸಂಕಲನಗಳನ್ನು ಸೇರಿಸಿದ್ದಾರೆ. ಅಕ್ಬರನ ಕಾಲದಲ್ಲಿ ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿ, ಅದರಲ್ಲಿ 164 ಚಿತ್ರಗಳನ್ನು ಅಳವಡಿಸಲಾಯಿತು. ಈ ಹೊತ್ತಗೆಯ ಹೆಸರು ರಜಮ್‍ನಾಮಾ. ಇನ್ನೊಂದು ಅತ್ಯಂತ ಪ್ರಶಸ್ತವಾದ ಪುಸ್ತಕ ಹಮಝನಾಮಾ. ಸಾಹಸ, ರಂಜನೆಯ ಕಥೆಗಳನ್ನು ಒಳಗೊಂಡ ಈ ಹೊತ್ತಗೆಯಲ್ಲಿ 1375 ಚಿತ್ರಗಳನ್ನು ಬಟ್ಟೆಯ ಮೇಲೆ ರಚಿಸಿ ಅಳವಡಿಸಿಲಾಯಿತು. ಇವಲ್ಲದೆ ಆ ಕಾಲದ ಅನೇಕ ಸಾಹಿತ್ಯ ಕೃತಿಗಳಿಗೂ ರಾಮಾಯಣ ಮುಂತಾದ ಧಾರ್ಮಿಕ ಗ್ರಂಥಗಳಿಗೂ ನಾಜೂಕಾದ ಚಿತ್ರಕಲಾ ಕೃತಿಗಳನ್ನು ಅಳವಡಿಸಿಲಾಯಿತು. ನಾಜೂಕು ರೇಖೆ, ಸುಂದರ ವರ್ಣಸಂಯೋಜನೆ ಸೂಕ್ಷ್ಮ, ಸುಳುಹುಗಳಿಂದ ಈ ಕಾಲದ ಚಿತ್ರಗಳು ಮೆರೆದವು. ಬೇಟೆ, ಸಂಗೀತ, ನೃತ್ಯ, ವಿಹಾರ ಕೂಟ, ವೃತ್ತಿನಿರತರು ಹೀಗೆ ನಾನಾ ವಸ್ತುವೈವಿಧ್ಯವನ್ನು ಈ ಚಿತ್ರಗಳಲ್ಲಿ ಕಾಣಲು ಸಾಧ್ಯ. ಅಕ್ಬರನ ಮಗ ಜಹಾಂಗೀರ್ ಕೂಡ ತನ್ನ ಆಸ್ಥಾನದಲ್ಲಿ ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡಿದ್ದ. ಅಕ್ಬರನ ಕಾಲದಲ್ಲಿ ಚಿತ್ರಕಲೆಯಲ್ಲಿ ನಿಷ್ಣಾತರಾದ ಮೀರ್‍ಸಯದ್, ಖ್ವಾಜಾ ಅಬ್ದುಲ್‍ಸಮದ್, ದಸವಂತ, ಬಲವಾನ್, ಬಿಶನ್‍ದಾಸ್, ಮುಕುಂದ, ಶೇಶು, ಮಾಧವಲಾಲ್, ಫಿರೂಕ್ ಮುಂತಾದ ನೂರುಮಂದಿಗೂ ಮಿಕ್ಕ ಕಲಾವಿದರು ರಾಜಾಶ್ರಯ ಪಡೆದಿದ್ದರು. ಮೊಗಲರ ಕಾಲದಲ್ಲಿ ಭಿತ್ತಿರಚನೆ ಇಳಿಮುಖವಾಗಿ, ಕಾಗದಪತ್ರಗಳ ಮೇಲಿನ ಕಲೆ ಪ್ರಾರಂಭವಾಯಿತು. ಜಹಾಂಗೀರಿನ ಕಾಲದಲ್ಲಿ ಯೂರೊಪಿನ ಅನೇಕ ಚಿತ್ರಗಳು ಭಾರತಕ್ಕೆ ಬಂದುವು. ಹೀಗಾಗಿ ಮೊಗಲ್‍ಕಲೆ ಯೂರೊಪ್ ಚಿತ್ರಕಲೆಯ ಪ್ರೇರಣೆಗೂ ಪಾತ್ರವಾಯಿತು. ಷಾಹಜಹಾನನ ಕಾಲದಲ್ಲಿ ಚಿತ್ರಕಲೆಯ ಸ್ಥಾನವನ್ನು ವಾಸ್ತುಕಲೆ ತುಂಬಿಕೊಂಡಿತ್ತಾದರೂ ಚಿತ್ರಕಲೆ ಪೂರ್ಣ ಸ್ವರೂಪದಲ್ಲಿ ನಾಮಾವಶೇಷವಾಯಿತೆಂದು ಹೇಳಲಾಗದು. ಅಂದಿನ ಚಿತ್ರಶೈಲಿಯನ್ನು ದಿಲ್ಲಿಕಲಂ ಎಂದು ಕರೆಯುವುದು ವಾಡಿಕೆ.

	ಕಾಂಗ್ರಾ ಚಿತ್ರಕಲೆ: ಮೊಗಲ್ ಕಲೆಯ ಕಾಲದಲ್ಲಿ ರಾಜಾಶ್ರಯ ಪಡೆದಿದ್ದ ಹಿಂದೂ ಚಿತ್ರಕಾರರು ನಾದಿರ್‍ಷಾನ ದಾಳಿಯ ಕಾರಣದಿಂದಾಗಿ ದೆಹಲಿ ಬಿಟ್ಟು ತೆರಳಿದರು. ನೆಲೆಕಳಕೊಂಡ ಕಲಾವಿದರು ಆಶ್ರಯ ಹುಡುಕುತ್ತ ಪಂಜಾಬ್ ಕಣೆವೆಯ ಮೂಲಕ ಹೊರಟರು. ಅಲ್ಲಿ ಅವರಿಗೆ ರಾಜಾ ದಿಲೀಪ್‍ಸಿಂಗನ ಅನಂತರ ಅವನ ಮಗ ಗೋವರ್ಧನ ಚಂದನ ಆಶ್ರಯ ಲಭ್ಯವಾಯಿತು. ಆತನ ಮಗ ಪ್ರತಾಪಚಂದ್ರ ಕಾಂಗ್ರಾಕೋಟೆಯನ್ನು ಕಟ್ಟಿಸಿ ಕಲಾವಿದರಿಗೆ ಆಶ್ರಯದಾತನಾದ. ಹೀಗೆ 'ಕಾಂಗ್ರಾಶೈಲಿ ಎಂಬ ಹೊಚ್ಚ ಹೊಸತೊಂದು ಶೈಲಿ ನಾಂದಿಹಾಡಿತು. ಗೀತಗೋವಿಂದ, ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳಿಂದ ಆಯ್ದ ಸನ್ನಿವೇಶಗಳಿಗೆ ಸಂಬಂಧಿಸಿದ ಚಿತ್ರರಚನೆಗಳು ಈ ಕಾಲದಲ್ಲಿ ಬಂದುವು. ಋತುಗಳನ್ನೂ ರಾಗಗಳನ್ನೂ ಕಾಂಗ್ರಾಶೈಲಿಯಲ್ಲಿ ನಿರೂಪಿಸಿರುವ ನಿದರ್ಶನಗಳುಂಟು. ರೇಖಾಲಾಲಿತ್ಯ ಮತ್ತು ವರ್ಣಮೋಹಕತೆಯ ಕಿರುಚಿತ್ರಗಳೂ ಈ ಶೈಲಿಯಲ್ಲಿ ನಿರ್ಮಾಣಗೊಂಡವು. ಕಾಂಗ್ರಾಶೈಲಿಯಲ್ಲಿ ಮೊಗಲ್ ಮತ್ತು ರಜಪೂತ ಶೈಲಿಗಳ ಪ್ರಭಾವ ಕಂಡುಬಂದರೂ ಇದೊಂದು ನೂತನ ವಿಶಿಷ್ಟಶೈಲಿಯೆಂದೇ ಪ್ರಖ್ಯಾತವಾಯಿತು. ಇದರ ಕಾಲ 18ನೆಯ ಶತಮಾನದದಿಂದ 19ನೆಯ ಶತಮಾನ.

	ರಜಪೂತ ಚಿತ್ರಕಲೆ: ರಾಜಸ್ಥಾನೀ ಚಿತ್ರಕಲೆ ಎಂದೂ ಕರೆಯಲ್ಪಡುವ ಈ ಶೈಲಿ 17-18ನೆಯ ಶತಮಾನದ ಅವಧಿಯಲ್ಲಿ ಉಚ್ಛ್ರಾಯಸ್ಥಿತಿಗೆ ಬಂತು. ಉದಯಪುರ, ಚಿತ್ತೂರು, ಬಿಕನೀರ್, ಜಯಪುರ, ಚಾವಂಡ, ಜೋಧಪುರ ಮುಂತಾದ ಸ್ಥಳಗಳಲ್ಲಿ ರಜಪೂತಶೈಲಿ ವಿಸ್ತರಿಸಿತ್ತು. ಹಿಮಾಲಯ ಪರ್ವಗಳ ಕಳಗಣ ಚಂಬಾ, ಬಸೋಲಿ, ಕಾಂಗ್ರಾ, ಜಮ್ಮುಗಳಲ್ಲೂ ಈ ಶೈಲಿ ಅಸ್ತಿತ್ವದಲ್ಲಿತ್ತು. ಹೀಗಾಗಿ ರಜಪೂತ ಚಿತ್ರಕಲೆಯನ್ನು ಪಹಾಡಿ ಶೈಲಿ ಎಂದೂ ಜಯಪುರ ಶೈಲಿ ಎಂದು ಎರಡು ವರ್ಗವಾಗಿ ಪರಿಗಣಿಸುತ್ತಾರೆ. ಇದರಲ್ಲೂ ಹಿಂದೂ ಮತಕ್ಕೆ ಸಂಬಂಧಿಸಿದ ಹಾಗೂ ಜನರ ದೈನಂದಿನ ಚಟುವಟಿಕೆಗಳನ್ನು ಒಳಗೊಂಡಿರುವ ಎರಡು ವಿಧದ ಚಿತ್ರಗಳನ್ನು ಕಾಣಬಹುದು. ಪ್ರೇಮ ಮತ್ತು ಭಕ್ತಿಯ ಸಾಕಾರ ರೂಪವನ್ನೂ ಈ ಶೈಲಿಯ ವಸ್ತುವಿನಲ್ಲಿ ಕಾಣಬಹುದು. ತಾವರೆ ಎಸಳಿನಂಥ ಕಣ್ಣುಗಳು, ಕೆಂದುಟಿಗಳು, ಘನವಾದ ಸ್ತನಗಳು, ನೀಳ ಕೇಶರಾಶಿ, ತೆಳುವಾದ ಸೊಂಟ, ನುಣುಪಾದ ಬೆಳ್ಳಗಿನ ದೇಹ, ಗುಲಾಬಿ ಬಣ್ಣದ ಹಸ್ತ-ಈ ಶೈಲಿಯ ಮುಖ್ಯ ಲಕ್ಷಣಗಳು. ಭಾರತೀಯ ಜನಪದ ಸಾಹಿತ್ಯದ ವರ್ಣಚಿತ್ರ ಈ ಶೈಲಿಯಲ್ಲಿ ಮೂಡಿಬಂದುವು. ರಾಗಮಲಿಕಾ ವರ್ಣನೆಗಳು, ಋತುವರ್ಣನೆ ನಾಯಕ-ನಾಯಿಕೆಯರ ಹಾಗೂ ಕೃಷ್ಣಚರಿತ್ರೆಯ ಅಂಶಗಳೇ ರಾಜಸ್ಥಾನೀ ಶೈಲಿಯ ಮುಖ್ಯ ವಸ್ತು. ರಾಜಸ್ಥಾನೀ ಶೈಲಿಯಂತೆ ದಕ್ಷಿಣಭಾರತದಲ್ಲೂ ವಿಜಯನಗರ ಹಾಗೂ ದಕ್ಷಿಣಶೈಲಿಯ ಸಂಪ್ರದಾಯಗಳು ಸ್ವಲ್ಪಸ್ವಲ್ಪವೇ ವಿಕಸನಗೊಂಡಿದ್ದವು. ವಿಜಯನಗರದ ವಿರೂಪಾಕ್ಷ, ದೇವಾಲಯದ ಸುಂದರ ಭಿತ್ತಿಚಿತ್ರಗಳಿವೆ. ಬಿಜಾಪುರ, ಗೋಲ್ಕೊಂಡ, ಅಹಮದಾಬಾದ್. ಹೈದರಾಬಾದ್ ಮುಂತಾದ ಸಂಸ್ಥಾನಗಳ ಅರಸರು ಕಲಾವಿದರಿಗೆ ಆಶ್ರಯ ನೀಡಿದ್ದರು. ಈ ಕಾಲದಲ್ಲಿ ಅಂದರೆ 17ನೆಯ ಶತಮಾನದಲ್ಲಿ ದಕ್ಷಿಣದ ಶೈಲಿಯಲ್ಲಿ ಚಿತ್ರ ನಿರ್ಮಾಣ ನಡೆದಿತ್ತು. ಅನೇಕ ರಾಗಗಳಿಗೆ ಚಿತ್ರಗಳನ್ನು ರಚಿಸಿ, ದಕ್ಷಿಣ ಶೈಲಿಯ ರಾಗಮಾಲಾ ಕೃತಿಗಳು ಅಸ್ತಿತ್ವಕ್ಕೆ ಬಂದವು.

	ಬಿಸೋಲಿ ಚಿತ್ರಕಲೆ: 17-18ನೆಯ ಶತಮಾನದ ಬಸೋಲಿಶೈಲಿ ವೈಷ್ಣವ ಧರ್ಮದ ಸ್ಪೂರ್ತಿಯ ನೆಲೆಯಾಗಿತ್ತು. ಕಾಂಗ್ರಾ ಶೈಲಿಯಲ್ಲಿ ಲಾಲಿತ್ಯ ಮತ್ತು ಲಾವಣ್ಯ ಮುಖ್ಯ ಪಾತ್ರವಹಿಸಿದರೆ. ಬಸೋಲಿ ಶೈಲಿಯಲ್ಲಿ ವರ್ಣಶೋಭೆಯ ಉತ್ತುಂಗತೆಯನ್ನು ಕಾಣಬಹುದು. ಮೊಗಲ್ ರಾಜಾಶ್ರಯ ತಪ್ಪಿಹೋದ ಅನಂತರ ಆ ಕಾಲದ ಕಲಾವಿದರು ಕಾಂಗ್ರಾದಲ್ಲಿ ನೆಲಸಿದ ಹಾಗೆ, ಹಿಮಾಲಯದ ತಪ್ಪಲುಪ್ರದೇಶವಾದ ಬಸೋಲಿಯನ್ನು ಆರಿಸಿ, ಈ ಚಿತ್ರ ಶೈಲಿಗೆ ನಾಂದಿ ಹಾಡಿದರು. ಕೆಂಪು ಹಳದಿ ನೀಲ ವರ್ಣಗಳನ್ನೇ ವಿಶೇಷವಾಗಿ ಬಳಸಿರುವ ಇವರು ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಸಾಂಕೇತಿಕತೆಯನ್ನು ಆರೋಪಿಸಿದ್ದಾರೆ. ಕೆಂಪು ಪ್ರೇಮದೇವತೆಯ ಬಣ್ಣ: ಹಳದಿ ಬಿಸಿಲಿನ, ವಸಂತ ಋತುವಿನ ಬಣ್ಣ-ಪ್ರೇಮಿಗಳ ಪ್ರೇಮಸಂಕೇತದ ಬಣ್ಣವೂ ಹೌದು; ನೀಲಿ ಕೃಷ್ಣನ ಬಣ್ಣ, ಸಸ್ಯಸಂಪತ್ತಿಗೆ ನೆರವಾಗುವ ಮೋಡದ ಬಣ್ಣವೂ ಹೌದು. ಒಟ್ಟಿನಲ್ಲಿ ಬಸೋಲಿ ಚಿತ್ರಶೈಲಿ ತನ್ನದೇ ಆದ ವೈಶಿಷ್ಟ್ಯದಿಂದ ಕಿರುರೂಪದ ವಿಧಾನದಿಂದ ಭಾರತೀಯ ಚಿತ್ರಕಲೆಯಲ್ಲಿ ಒಂದು ವಿಶಿಷ್ಟಸ್ಥಾನ ಪಡೆದಿದೆ.

	ಮೈಸೂರು ಚಿತ್ರಕಲೆ: ರಜಪೂತರು ಪ್ರಾಬಲ್ಯದ ಅನಂತರ ಚಿತ್ರಕಲಾವಿದರೆಲ್ಲ ಅಲ್ಲಲ್ಲಿ ಚದುರಿಹೋದರು. ದಕ್ಷಿಣಕ್ಕೆ ಬಂದ ಕೆಲವರು ತಂಜಾವೂರು, ಮೈಸೂರು, ಸಂಸ್ಥಾನಗಳ ರಾಜಾಶ್ರಯ ಪಡೆದರು. 19ನೆಯ ಶತಮಾನದ ಕಾಲದಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿ ಮೈಸೂರು ಪದ್ಧತಿ ಅಭಿವೃದ್ಧಿ ಹೊಂದಿತು.

	ಪುನರುಜ್ಜೀವನ: 20ನೆಯ ಶತಮಾನ ಭಾರತೀಯ ಚಿತ್ರಕಲೆಯ ಪುನರುಜ್ಜೀವನ ಕಾಲವೆನ್ನಬಹುದು. ಸ್ವದೇಶೀ ಜಾಗೃತಿ ಮೂಡಿದ ಈ ಕಾಲಘಟ್ಟದಲ್ಲಿ ಅಜಂತಕಲೆಯೂ ಬೆಳಕಿಗೆ ಬಿದ್ದು ನಮ್ಮ ಕಲಾಪರಂಪರೆ ಹೊಸತೊಂದು ಆಯಾಮಕ್ಕೆ ಸೇರ್ಪಡೆಯಾಯಿತು. ಈ ಕಾಲದಲ್ಲಿ ಚಿತ್ರಕಲೆಯ ನೂತನ ಆಂದೋಲನದಲ್ಲಿ ಇ.ಬಿ. ಹ್ಯಾಲೆಲ್ ಮತ್ತು ಅವನೀಂದ್ರನಾಥ ಠಾಕೂರ್. ಇವರ ಜೊತೆಗೆ ಮೇಜರ್‍ಗಿಲ್, ಜೋರ್‍ಗ್ರಿಫಿತ್ಸ್, ಲೇಡಿ ಹ್ಯಾರಂಗ್‍ಹ್ಯಮ್, ನಂದಲಾಲ್‍ಬಸು, ವೆಂಕಟಪ್ಪ, ಡಿ.ಪಿ. ರಾಯ್‍ಚೌದರಿ ಮುಂತಾದವರೂ ದುಡಿದಿದ್ದಾರೆ. ಈ ಕಾಲದಲ್ಲಿ ಉದಯವಾದ ಬಂಗಾಲದ ನೂತನ ಜಲವರ್ಣ ಚಿತ್ರರಚನಾ ಸಂಪ್ರದಾಯವನ್ನು ದೇವಿಪ್ರಸಾದರಾಯ್, ಅಸಿಕುಮಾರ್ ಹಲ್ದ್‍ರ್, ಮುಜಮ್‍ದಾರ್ ಮೊದಲಾದವರು ಚೈತನ್ಯ ತುಂಬಿ ಮುಂದುವರಿಸಿಕೊಂಡು ಹೋದರು. ಅವನೀಂದ್ರನಾಥ್ ಠಾಕೂರ್ ಅವರ ಭಾರತಮಾತಾ, ಗಣೇಶ ಜನನಿ, ಅಶೋಕನರಾಣಿ, ತಾಯಿಮಕ್ಕಳು, ನಂದಲಾಲ ಬಸು ಅವರ ಕಾಳಿ, ಅನ್ನಪೂರ್ಣ, ಗಾಂಧೀಜಿಯ ದಂಡೀಯಾತ್ರೆ, ರಾಜಾರವಿವರ್ಮನ ರಾಜಾ ಹರಿಶ್ಚಂದ್ರ, ರಾವಣ ಮತ್ತು ಜಟಾಯು, ಮತ್ಸಗಂಧಿ, ಶಕುಂತಲಾ ಪತ್ರಲೇಖನ, ಕೆ. ವೆಂಕಟ್ಪನವರ ಶಕುಂತಲೆಯ ಬೀಳ್ಕೊಡುಗೆ, ಮೃಗತೃಷ್ಣಾ ಅಮೃತಾ ಶೇರ್‍ಗಿಲ್ ಅವರ ಮದುಮಗಳ ಶೃಂಗಾರ, ಬ್ರಹ್ಮಚಾರಿ, ಹೊಲೆಯರ ಮಗು, ಮೂವರು ಸೋದರಿಯರು, ಚಳಿಗಾಲ, ಕ್ಷಿತೀಂದ್ರನಾಥ್ ಮುಜಮ್‍ದಾರ್, ಅವರ ಕೃಷ್ಣನ ನೃತ್ಯ, ದೇವಿಪ್ರಸಾದಾರಾಯ್ ಚೌದರಿ ಅವರ ಅರ್ಜುನ ಮತ್ತು ಚಿತ್ರಾರಂಗದ, ಸೆರೆಹಿಡಿದ ಬೆಳಕು, ಚೈತನ್ಯನ ಸಮಾಧಿ, ಸುರೇಂದ್ರನಾಥ್‍ಕಾರ್ ಅವರ ತಾಯಿ, ಈಶ್ವರಪ್ರಸಾದ್‍ವರ್ಮ ಅವರ ಪರ್ದಾನಿಷಿಂ, ದಾಮರ್ಲರಾಮಾರಾಯ ಅವರ ಬುದ್ಧನ ತ್ಯಾಗ ಪಾರಿವಾಳಗಳು, ಸುಧೀರ್‍ಖಾಸ್ತಗೀರ್ ಅವರ ಪರವಶತೆ, ವಿನಾಯಕರಾವ್ ಮಾಸೋಜಿಯವರ ಕುರಿಕಾಯುವ ಹೆಂಗಸು, ಪಿ.ಆರ್.ರಾಯ್. ಅವರ ಸಂಗೀತ, ಮಾಧವ ಮೆನಾನ್ ಅವರ ಜಿಂಕೆಗಳು, ಆರ್.ಡಿ. ಧೂಪೇನ್ ವಾಕಕ್ಕೆ ಅವರ ಪ್ರೇಮದ ವಿಳಂಬನೆ, ರಸಿಕಲಾಲ್ ಪರೇಕರ ಅವರ ಬಡವರ ಸ್ವರ್ಗ, ಕೆ.ಎಂ.ಧಾರ್ ಅವರ ಮಹಾರಾಷ್ಟ್ರದಲ್ಲಿಯ ಹೋರಿಗಳ ಸಂತೆ, ಬೀಬೀಸ್ಮಾರ್ಟ್ ಅವರ ಶೇಷಶಾಯಿ, ಅಮೂಲ್ಯರಾಯ್ ಚೌಧುರಿ ಅವರ ಸೋದರಿಯರು. ವಿಶ್ವನಾಥ್ ಮುಖರ್ಜಿ ಅವರ ತಾಯಿ ಮಗು, ಕೃಪಾಲ್‍ಸಿಂಗ್ ಅವರ ಶ್ರೀರಾಮನ ಪಾದುಕೆ ತರುವುದು, ಹೀರಾಚಂದದೂಗ ಅವರ ತಾಯಿ ಮಗು, ಶೀಲಾ ಆಡನ್ ಅವರ ಕೃಷ್ಣ ಗೋಪಿಯರು-ಈ ಮುಂತಾದ ಚಿತ್ರಗಳು ಭಾರತೀಯ ಕಲಾಸಂಪ್ರದಯದ ಅತ್ಯುತ್ತಮ ಕೊಡುಗೆಗಳಾಗಿವೆ.

	ಭಾರತೀಯ ಚಿತ್ರಕಲೆಯ ಪುನಶ್ಚೇತನಕ್ಕೆ ಕಲ್ಕತ್ತ ಕೇಂದ್ರವಾದಂತೆ ಪಾಶ್ಚಾತ್ಯ ಶೈಲಿಯ ಪ್ರಭಾವದಿಂದ ಆಧುನಿಕ ಭಾರತೀಯ ಚಿತ್ರಕಾಲಾ ವೈಖರಿಗೆ ಮುಂಬಯಿ ತವರುಮನೆ ಆಯಿತು. ಹಾಗೆಯೇ ಮದರಾಸಿನ ಬಳಿ ಚೋಳಮಂಡಲವೆಂಬ 16 ಚಿತ್ರಕಾರರ ಕಲಾಗ್ರಾಮವೊಂದು ಚಿತ್ರಕಲೆಗೆ ಆಸರೆಯಾಯಿತು. ಹುಸೇನ್, ಅಕ್ಬರ್ ಪದಮ್‍ಸೀ, ಕೆ.ಕೆ. ಹೆಬ್ಬಾರ್, ಕೃಷನ್‍ಖನ್ನಾ, ರಾಮ್‍ಕುಮಾರ್, ಗಾಯ್ತೊಂಡೆ, ಫ್ರಾನ್ಸಿಸ್ ಡಿಸೋಜಾ, ಸತೀಶ್‍ಗುಜರಾಲ್, ಕೃಷ್ಣಾರೆಡ್ಡಿ, ವಾಸುದೇವ್, ಜಿ.ಎಸ್.ಶೆಣೈ ಮುಂತಾದವರ ಕಲಾಪರಿಶ್ರಮ ಈ ನಿಟ್ಟಿನಲ್ಲಿ ಉಲ್ಲೇಖಾರ್ಹವಾದುದು. 

(ನೋಡಿ- ಚಿತ್ರಕಲೆ)
(ನೋಡಿ- ಚಿತ್ರಶಾಲೆಗಳು)
(ನೋಡಿ- ಜಯಚಾಮರಾಜೇಂದ್ರ-ಚಿತ್ರಶಾಲೆ) 								
(ಎಸ್.ಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ